ರಾಧಾಕೃಷ್ಣ, ಸಿ - 
	ಕೋಲಾರದ ಹೆಸರಾಂತ ನಟುವನಾರ್ ಮನೆತನದ ಯಜಮಾನ್ ಕಿಟ್ಟಣ್ಣನವರು ಪ್ರತಿಪಾದಿಸಿದ ಭರತನಾಟ್ಯ ಸಂಪ್ರದಾಯದ ಉತ್ತರಾಧಿಕಾರಿ ಎಂಬ ಕೀರ್ತಿ ಬೆಂಗಳೂರಿನ ಸಿ. ರಾಧಾಕೃಷ್ಣರಿಗೆ ಸಲ್ಲುತ್ತದೆ. ಕಿಟ್ಟಣ್ಣನವರ ಪಟ್ಟ ಶಿಷ್ಯರೂ, ರಾಧಾಕೃಷ್ಣರ ಸೋದರ ಮಾವಂದಿರೂ ಆದ ಎನ್. ಗುಂಡಪ್ಪನವರಿಂದ, ಸಂಪ್ರದಾಯ ಬದ್ಧವಾಗಿ ನೃತ್ಯಶಾಸ್ತ್ರವನ್ನು ಅಭ್ಯಸಿಸಿ, ನಟುವಾಂಗದಲ್ಲಿ ಪ್ರಾವೀಣ್ಯತೆ ಗಳಿಸಿ, ನೃತ್ಯ ಸಂಯೋಜನೆ ಮತ್ತು ನೃತ್ಯ ಶಿಕ್ಷಣಗಳೆರಡರಲ್ಲೂ ಹೆಸರು ಮಾಡಿರುವ ರಾಧಾಕೃಷ್ಣ ತಮ್ಮ ಚಿತ್ರರಂಜನಿ ಕಲಾಕ್ಷೇತ್ರದ ಮೂಲಕವೂ, ಕೈಶಿಕೆ ನೃತ್ಯ ಶಾಲೆಯ ಸಲಹೆಗಾರರಾಗಿಯೂ ಅನೇಕ ಶಿಷ್ಯರು ಈ ಕಲೆಯಲ್ಲಿ ಪ್ರಾವೀಣ್ಯತೆಗಳಿಸಲು ಕಾರಣರಾಗಿದ್ದಾರೆ. ಪ್ರಸ್ತುತ ಈ ಪಟ್ಟಿಗೆ ಭಾರತೀಯ ವಿದ್ಯಾಭವನದ ಕಲಾ ಭಾರತೀಯ ಭರತನಾಟ್ಯ ವಿಭಾಗವೂ ಸೇರಿ ಈ ನಿಟ್ಟಿನ ಇವರ ಸೇವೆ ಮತ್ತೂ ಹುರುಪಿನಿಂದ ಸಾಗುತ್ತಿದೆ.

	ಮೈಸೂರಿನಲ್ಲಿ 1928ರ ಜನವರಿಯಲ್ಲಿ ಜನಿಸಿದ ರಾಧಾಕೃಷ್ಣರಿಗೆ ಸಣ್ಣವಯಸ್ಸಿನಿಂದಲೇ ಸಂಗೀತ, ನೃತ್ಯಗಳತ್ತ ಒಲುವಿದ್ದರೂ, ತಂದೆ ಬಿ. ಆರ್. ಚಿನ್ನಯ್ಯನವರ ಅಪೇಕ್ಷೆಯಂತೆ, ಬೆಂಗಳೂರಿನ ಸರಕಾರಿ ಇಂಜಿನಿಯರಿಂಗ್ ಕಾಲೇಜಿನ ಫೌಂಡ್ರಿ ವಿಭಾಗದಲ್ಲಿ ತರಬೇತಿ ಹೊಂದಿ ಅಲ್ಲಿಯೇ ಬೋಧಕರಾಗಿಯೂ ಮುಂದುವರೆದರು. ಜೊತೆ ಜೊತೆಯಲ್ಲೇ ಮಾವ ಗುಂಡಪ್ಪನವರ ಪ್ರೇರಣೆಯಿಂದ ಅವರಿಂದಲೇ ನೃತ್ಯದಲ್ಲೂ, ತಾವರೆಕೆರೆ ರಾಮರಾಯರಿಂದ ಸಂಗೀತದಲ್ಲೂ ಕಲಿಕೆಯನ್ನು ಮುಂದುವರಿಸಿದರು. ತಮ್ಮ 17ನೆಯ ವಯಸ್ಸಿನಲ್ಲಿ ಸಂಗೀತ ಕಛೇರಿಯೊಂದರಲ್ಲಿ ಭಾಗವಹಿಸಿ ಗುರು ಹಿರಿಯರ ಮೆಚ್ಚುಗೆಯನ್ನು ಗಳಿಸಿದರು. ಅಂದಿನಿಂದ ಮೇಲಿಂದ ಮೇಲೆ ಮದುವೆ ಮುಂತಾದ ಸಂದರ್ಭಗಳಲ್ಲಿ ಇವರ ಹಾಡುಗಾರಿಕೆ ಮುಂದುವರಿಯಿತು. ಸಂಗೀತ ಗುರು ರಾಮರಾಯರು ತಮ್ಮ ಸ್ವಗ್ರಾಮಕ್ಕೆ ತೆರಳಿದ್ದುದರಿಂದ, ಮುಂದೆ ನೃತ್ಯದತ್ತ ಗಮನಹರಿಸಿ, ಪ್ರದರ್ಶನಗಳನ್ನು ನೀಡುತ್ತ ಬಂದರು. ಇವರ ಪ್ರತಿಭೆಯನ್ನು ಮೆಚ್ಚಿದ ಗುಬ್ಬಿ ವೀರಣ್ಣನವರ ನಾಟಕ ಕಂಪನಿಯ ಸಂಪರ್ಕ ಹೊಂದಿದ್ದ ಕು.ರಾ ಸೀತಾರಾಮಶಾಸ್ತ್ರೀಯವರ ಪ್ರಭಾವದಿಂದ, ಆ ವಿಖ್ಯಾತ ಮಂಡಳಿಯ “ಗೌತಮ ಬುದ್ಧ” ಎಂಬ ನಾಟಕದಲ್ಲಿ ಗಾಯಕ ಸನ್ಯಾಸಿಯೊಬ್ಬನ ಪಾತ್ರದಲ್ಲಿ ನಟಿಸಿ, ಜನಪ್ರಿಯರಾದರು. ಅಂತೆಯೇ ತಮ್ಮ ಸಹಚರರನ್ನೊಡಗೂಡಿ ಒಂದೆರಡು ನಾಟಕಗಳನ್ನು ತಯಾರಿಸಿದರು. ಅವು ಫಲಪ್ರದವಾಗದ ಕಾರಣ ಆ ಹುಚ್ಚಿನಿಂದ ಪಾರಾಗಿ, ಗಾಂಧೀನಗರದಲ್ಲಿ ತಮ್ಮ ನೃತ್ಯ ಶಾಲೆಯನ್ನು ಆರಂಭಿಸಿ, ನೃತ್ಯ ಶಿಕ್ಷಣದಲ್ಲಿ ತೊಡಗಿದರು. ಖ್ಯಾತ ಕಲಾ ವಿಮರ್ಶಕ ಜಿ. ವೆಂಕಟಾಚಲಂರ ಸಲಹೆಯಂತೆ, ತಮ್ಮ ಶಿಷ್ಯೆಯೊಬ್ಬಳ ರಂಗಪ್ರವೇಶವನ್ನು ಚೆನ್ನೈನಲ್ಲಿ ಏರ್ಪಡಿಸಿ, ಅಲ್ಲಿನ ಕಲಾರಸಿಕರ ಮೆಚ್ಚುಗೆ ಗಳಿಸಿ, “ಭರತಕಲಾಮಣಿ” ಎಂಬ ಬಿರುದನ್ನು ಸಂಪಾದಿಸಿದರು. ಅದೇ ಸಮಯದಲ್ಲಿ ಶಿಷ್ಯೆ ಸುಧಾರಾಮರಾವ್‍ರ ಅಪೇಕ್ಷೆಯಂತೆ, ಮಧುರೆಯಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸಿ, ಅದರ ಯಶಸ್ಸಿನ ಪರಿಣಾಮವಾಗಿ ಅಲ್ಲಿ ನೃತ್ಯ ತರಗತಿಗಳನ್ನು ನಡೆಸಲು ಪ್ರಾರಂಭಿಸಿದರು. ಹೀಗೆ ಎರಡು ಮೂರು ಊರುಗಳಲ್ಲಿ ನೃತ್ಯ ತರಗತಿಗಳನ್ನು ನಡೆಸುವ ಒತ್ತಡದಿಂದ ಕಾಲೇಜಿನ ಉದ್ಯೋಗವನ್ನು ಕೈಬಿಡಬೇಕಾಯಿತು. ಆದರೆ, ಈ ವೇಳೆಗೆ ಕಿಟ್ಟಣ್ಣನವರ ಮೊಮ್ಮಗಳು, ಸ್ವತಃ ನೃತ್ಯ ಕಲಾವಿದೆ ಮೀನಾಕ್ಷಿ ಅವರೊಂದಿಗೆ ವಿವಾಹವಾಗಿ, ನಾಟ್ಯಕಲೆಯ ಪೋಷಣೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಾದರು ರಾಧಾಕೃಷ್ಣ. 

	ಹೀಗೆ ಪ್ರವರ್ಧಮಾನಕ್ಕೆ ಬಂದ ಶ್ರೀಯುತರ ಚಿತ್ತರಂಜನಿ ಕಲಾಕ್ಷೇತ್ರ ರಾಜ್ಯದ, ದೇಶದ ನೃತ್ಯ ಜಗತ್ತಿನಲ್ಲಿ ಒಳ್ಳೆಯ ಹೆಸರು ಗಳಿಸುವಂತಾಯಿತು. ಇವರ ಶಿಷ್ಯರ ಕಾರ್ಯಕ್ರಮಗಳಿಗೆ ಬೇಡಿಕೆಯೂ ಹೆಚ್ಚಿ ಹಿರಿಯ ಶಿಷ್ಯರುಗಳಾದ ಪದ್ಮಿನಿ, ವೀಣಾ ಇವರುಗಳ ಅಪರೂಪ ನೃತ್ಯ ಸಂಯೋಜನೆಗಳನ್ನು ಪ್ರದರ್ಶಿಸಿ, ರಾಧಾಕೃಷ್ಣರ ಪ್ರೌಢ ವಿದ್ಯೆಯ ಪ್ರಚಾರಕರಂತಾದರು. ಗುರು ಕಿಟ್ಟಣ್ಣನವರ ವಶದಲ್ಲಿದ್ದ ಎರಡು ಬೃಹದ್ ಗ್ರಂಥಗಳ ಸಹಾಯದಿಂದ, ವೈವಿದ್ಯಮಯ ತಾಳಗಳಿಗೆ ಅಳವಡಿಸಿದ ತಿಲ್ಲಾನಗಳು, ಕೆಲವು ಅಪರೂಪ ಪ್ರಬಂಧಗಳು ಮತ್ತು ಸಪ್ತತಾಳೇಶ್ವರಿ ಎಂಬ ಸಂಕೀರ್ಣ ನರ್ತನದ ಪ್ರಯೋಗದಲ್ಲಿಯಾ ಯಶಸ್ವಿಯಾದರು, ಕೀರ್ತಿ ಶಾಲಿಮಾದರು.

	ಇದರಿಂದ ಪ್ರಭಾವಿತರಾದ ಅಂದಿನ ಜನಪ್ರಿಯ ರಾಜಕಾರಣಿ ಡಾ|| ಜೀವರಾಜ್ ಆಳ್ವರ ಪ್ರೇರಣೆಯಿಂದ ಶಾಂತಲಾ, ಶಾಕುಂತಲೆ, ವಿಷಕನ್ಯೆ, ಪದ್ಮವತಿ ಪರಿಣಯ ಮುಂತಾದ ನೃತ್ಯ ನಾಟಕಗಳನ್ನು ಸಂಯೋಜಿಸಿ, ಅವುಗಳ ಯಶಸ್ವೀ ಪ್ರದರ್ಶನಗಳಿಂದ ರಾಧಾಕೃಷ್ಣ ದಂಪತಿಗಳು ಹೆಚ್ಚು ಜನಪ್ರಿಯತೆಯನ್ನು ಸಂಪಾದಿಸಿದರು. ಅಂತೆಯೇ ರಾಧಾಕೃಷ್ಣರು ನೃತ್ಯ ನಿರ್ದೇಶನದಲ್ಲಿ ಸಹಾಯ ಹಸ್ತ ನೀಡಿದ ಹಂಸಗೀತೆ, ಕಾವೇರಿ, ಪಾವನಗಂಗಾ ಮುಂತಾದ ಚಲನಚಿತ್ರಗಳಿಂದಲೂ ಇವರ ಖ್ಯಾತಿ ಪಸರಿಸಿತು.

	ಇವರು 2004ರಲ್ಲಿ ಪ್ರಸ್ತುತ ಪಡಿಸಿದ ಭರತಮೇಳ ಎಂಬ ಸಂಯೋಜನೆ ಒಂದು ಅತ್ಯುತ್ತಮ ಕೊಡುಗೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ.

	ಹೀಗೆ, ಶ್ರೀಯುತರನ್ನರಸಿ ಬಂದ ಪ್ರಶಸ್ತಿಗಳು, ಬಿರುದುಗಳು ನೂರಾರು. ಅವುಗಳಲ್ಲಿ ರಾಜ್ಯ ಸಂಗೀತ-ನೃತ್ಯ, ಅಕೆಡೆಮೆ, ರಾಜ್ಯೋತ್ಸವ ಪ್ರಶಸ್ತಿಗಳೂ 2003 ನೇ ಸಾಲಿನ ಶಾಂತಲಾ ನಾಟ್ಯ ಪ್ರಶಸ್ತಿಯೂ ಸೇರಿವೆ.		
(ಎಸ್.ಎನ್.ಚಂದ್ರಶೇಖರ್)